ಭಾರತೀಯ ಮೂಲ ಕೃಷಿ ಪದ್ಧತಿಗೆ ವಿರುದ್ಧವಾಗಿ 1960ರ ದಶಕದ ಸಮಯದಿಂದ ನಾವು ರಾಸಾಯನಿಕವಾಗಿ ತಯಾರಾದ ಗೊಬ್ಬರ, ರೋಗನಿರೋಧಕ ಮತ್ತು ಕೀಟನಾಶಕಗಳನ್ನು ಬಳಕೆ ಮಾಡುತ್ತ, ಪ್ರಾಚೀನ ಕೃಷಿ ಪದ್ಧತಿಯನ್ನು ಹಿಂದಿಕ್ಕಿದ್ದೇವೆ. 'ಅಧಿಕ ಬೆಳೆ – ಅಧಿಕ ಲಾಭ' ಘೋಷವಾಕ್ಯಕ್ಕೆ ನಮ್ಮ ಇಂದಿನ ಕೃಷಿ ಸಿಲುಕಿದೆ. ಮಧ್ಯವರ್ತಿಗಳ ಲಾಭದ ಮನೋಭಾವಕ್ಕೆ ಸಿಲುಕಿದ ರೈತ, ಬೆಳೆದ ಬೆಳೆಯನ್ನು ದಾಸ್ತಾನು ಮಾಡಲು ಸೂಕ್ತ ವ್ಯವಸ್ಥೆ ಕಾಣದ ರೈತ, ತಾನು ಹೆಚ್ಚಾಗಿ ಬೆಳೆದ ಬೆಳೆಯನ್ನು ಸಣ್ಣ ಉದ್ಯಮವಾಗಿ ಪರಿವರ್ತಿಸುವತ್ತ ಸಫಲನಾಗದ ಇಂದಿನ ರೈತ, ಬೆವರು ಸುರಿಸಿ ಬೆಳೆ ಬೆಳೆದರೂ 'ಆತ್ಮಹತ್ಯೆಗೆ' ಬಲಿಯಾಗುತ್ತಿದ್ದಾನೆ ಅಲ್ಲವೇ? ರೈತನಿಗೂ ಬೆಲೆಸಿಗದ, ಪರಿಸರವನ್ನೂ, ಜನರ ಆರೋಗ್ಯವನ್ನು ಹಾಳುಗೆಡುವ ಭೂ ಮಾತೆಯ ಕುರಿತು ಕಿಂಚಿತ್ತೂ ಕಾಳಜಿತೋರದ ಕೃಷಿ ಪದ್ಧತಿಯನ್ನು ಸುಧಾರಿಸಲು ಪ್ರಬಲ ಇಚ್ಛಾಶಕ್ತಿಯ ರಾಜಕಾರಣ ಬೇಕು. ಭಾರತೀಯ ಜೀವನ ಪದ್ಧತಿಯನ್ನು ಎಡ-ಬಲವೆಂದು ವಾದಿಸುವ ಮನೋಭಾವ ಬೆಳೆಸುವುದು ಆ ಕುರಿತು ವಿಶ್ಲೇಷಿಸುವುದು 'ಭೂವಂದನ'ದ ಕೆಲಸವಲ್ಲ. ಇಲ್ಲಿ ನಮಗಿರುವ ಒಂದೇ ಧರಣಿಯನ್ನು ಭರಣಿಯಾಗಿ ಸುಪೋಷಣವಾಗಿರಿಸಿಕೊಳ್ಳುವುದು ಹೇಗೆ ಎನ್ನುವತ್ತ ಮಾತ್ರ ನಮ್ಮ ಚಿಂತನ-ಮಂಥನ. ನಾವು ಸೇವಿಸುವ ಆಹಾರ/ತರಕಾರಿ ವಿಷಯುಕ್ತವಾದರೆ ಅದು ನಮ್ಮ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುವುದೆನ್ನುವುದನ್ನು ಮೊದಲು ಮನದಟ್ಟು ಮಾಡಿಕೊಳ್ಳೋಣ. ಆನಂತರ ಭೂಮಿಯನ್ನು ಸುಪೋಷಣಗೊಳಿಸುವತ್ತ ಚಿಂತಿಸೋಣ.